ಹೈನುಗಾರಿಕೆ ಮೇಲೆ ಚಳಿಗಾಲದ ಕೆಟ್ಟ ಪ್ರಭಾವ : ಸಂಕಷ್ಟದಲ್ಲಿ ನಾಡಿನ ರೈತರು

ಚುಮು ಚುಮು ಚಳಿಯಲ್ಲಿ ಪ್ರವಾಸ ಮಾಡುತ್ತಾ ಎಂಜಾಯ್​ ಮಾಡುತ್ತಿರುವವರು ಒಂದೆಡೆಯಾದರೆ ಹೈನೋದ್ಯಮವನ್ನೇ ನಂಬಿ ಬದುಕುತ್ತಿರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಬಂದರೆ ಬೆಳೆ ನಾಶ, ಚಳಿ ಬಂದರೆ ಹೈನೋದ್ಯಮ ಕುಸಿತ ಎಂಬ ಪಾಡು ನಾಡಿನ ರೈತರದ್ದಾಗಿದೆ. ನಾಡಿನಲ್ಲಿ ಹೈನೋದ್ಯಮವನ್ನೇ ನಂಬಿಕೊಂಡಿರುವ ಅನೇಕ ಕುಟುಂಬಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಹಸುಗಳ ಹಾಲಿನ ಇಳುವರಿಯಲ್ಲಿ ಭಾರಿ ಕುಸಿತ ಕಂಡು ಬಂದಿದೆ.

ಹೈನೋದ್ಯಮದಲ್ಲಿ ಎತ್ತಿದ ಕೈ ಎಂದರೆ ಚಿಕ್ಕಬಳ್ಳಾಪುರ ಜಿಲ್ಲೆ. ಇಲ್ಲಿ ಹಾಲು ಮಾರಿ ಸ್ವಾಭಿಮಾನದ ಬದುಕು ಸವೆಸುತ್ತಿರುವ ಅನೇಕ ಕುಟುಂಬಳಿವೆ. ಆದರೆ ಚಳಿಯಿಂದಾಗಿ ಹಸು, ಎಮ್ಮೆಗಳು ಸರಿಯಾಗಿ ಮೇವು ತಿನ್ನಲು ನಿರಾಕರಿಸುತ್ತಿವೆ. ನೀರನ್ನೂ ಸರಿಯಾಗಿ ಕುಡಿಯುತ್ತಿಲ್ಲ. ಹೀಗಾಗಿ ಹಾಲಿನ ಇಳುವರಿಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ .
ಇದರಿಂದ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಮೆಗಾ ಡೈರಿಯಲ್ಲಿಯೂ ಹಾಲಿನ ಪೂರೈಕೆ ಇಳಿಮುಖವಾಗಿದೆ.
ಕಳೆದ ಕೆಲವು ದಿನಗಳಿಂದ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಕೋಚಿಮುಲ್ ಮೆಗಾ ಡೈರಿಗೆ ಪ್ರತಿದಿನ 25 ಸಾವಿರ ಲೀಟರ್ ಹಾಲಿನ ಕೊರತೆ ಉಂಟಾಗುತ್ತಿದೆ. ಇದೇ ರೀತಿ ಮುಂದುವರೆದರೆ ಮೆಗಾ ಡೈರಿಗೆ ನಿರೀಕ್ಷೆಯಷ್ಟು ಹಾಲು ಸಿಗಲ್ಲ ಅಂತ, ಕೋಚಿಮುಲ್ ಆಡಳಿತ ಮಂಡಳಿ ಜನವರಿ, ಫೆಬ್ರ್ರವರಿ, ಮಾರ್ಚ್ ಸೇರಿ ಮೂರು ತಿಂಗಳೂ ಪ್ರತಿ ಲೀಟರ್ ಹಾಲಿಗೆ 1 ರೂ. ದರ ಹೆಚ್ಚಳ ಮಾಡಿದೆ. ಆದರೂ ಹಾಲಿನ ಉತ್ಪಾದನೆಯಲ್ಲಿ ಏರಿಕೆ ಮಾತ್ರ ಕಂಡು ಬಂದಿಲ್ಲ. ಇದು ಕೇವಲ ಚಿಕ್ಕಬಳ್ಳಾಪುರ ಜಿಲ್ಲೆಯ ಸಮಸ್ಯೆ ಮಾತ್ರ ಆಗಿರದೇ. ರಾಜ್ಯದ ಅನೇಕ ಜಿಲ್ಲೆಗಳ ಹೈನೋದ್ಯಮಿಗಳು ಚಳಿಯ ಸಂಕಷ್ಟಕ್ಕೆ ಸಿಲುಕಿದ್ದಾರೆ.

Exit mobile version